ನವದೆಹಲಿ/ಬೆಂಗಳೂರು: 2016ರ ಕರ್ನಾಟಕ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಆರೋಪಿಗಳಾದ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ಹಾಗೂ ಓಬಳರಾಜುವಿಗೆ ರಿಲೀಫ್ ನೀಡಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಇದೀಗ ಸುಪ್ರೀಂಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠ 2017ರ ಅಕ್ಟೋಬರ್ 17ರಂದು ಶಿವಕುಮಾರಯ್ಯಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆ ಸಂಚಿನ ಆರೋಪದಿಂದ ಓಬಳರಾಜನನ್ನ ಮುಕ್ತಗೊಳಿಸಿತ್ತು. ಆ ಬಳಿಕವೂ ಶಿವಕುಮಾರಯ್ಯ ಇಂತಹುದೇ ಕೃತ್ಯಗಳಲ್ಲಿ ಭಾಗಿಯಾಗಿದ್ದನ್ನು ಗಮನಿಸಿದ ಸರ್ಕಾರ, ಆರೋಪಿಗಳಿಗೆ ರಿಲೀಫ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, “ಇಂತಹ ಜನರು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಮಧ್ಯಪ್ರದೇಶದ ವ್ಯಾಪಂ ಪ್ರಕರಣದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಶಿಕ್ಷಣ ವ್ಯವಸ್ಥೆಯನ್ನು ವಿರೂಪಗೊಳಿಸುವಂತಹ ಪ್ರಕರಣಗಳನ್ನು ನಾವಿಂದು ಎದುರಿಸುತ್ತಿದ್ದೇವೆ” ಎಂದು ಹೇಳಿ, ಆರೋಪಿಗಳಿಗೆ ರಿಲೀಫ್ ನೀಡಿದ್ದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ಪ್ರಕರಣದ ಹಿನ್ನೆಲೆ
2016ರ ಮಾರ್ಚ್ 21ರಂದು ನಡೆದಿದ್ದ ದ್ವಿತೀಯ ಪಿಯು ರಸಾಯನಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆ ಅದೇ ದಿನ ದಿನ ಬೆಳಗ್ಗೆ 7.30ಕ್ಕೆ ಸೋರಿಕೆಯಾಗಿ ವಾಟ್ಸ್ ಆ್ಯಪ್ನಲ್ಲಿ ಹರಿದಾಡಿತ್ತು. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಶಿವಕುಮಾರಯ್ಯ, ಓಬಳರಾಜ ಸೇರಿ ಅನೇಕರ ವಿರುದ್ಧ ಕೇಸ್ ದಾಖಲಾಗಿದೆ.