ಏಕದಿನ ರ್ಯಾಂಕಿಂಗ್ :ನಾಲ್ಕು ವರ್ಷಗಳ ನಂತರ ಅಗ್ರಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಕೊಹ್ಲಿ

ಲಂಡನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಧೂರಿ ಪ್ರದರ್ಶನ ತೋರಿದ್ದು, ಅಗ್ರಸ್ಥಾನಕ್ಕೇರುವ ಅವಕಾಶ ದೊರೆತಿದೆ.
ಪ್ರಸ್ತುತ ವಿರಾಟ್ ಕೊಹ್ಲಿ 857 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ದ.ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಬಾಬರ್ ಅಜಮ್ 27 ಅಂಕ ಪಡೆದಿದ್ದು ಪ್ರಸ್ತುತ 852 ಅಂಕಗಳನ್ನು ಹೊಂದಿದ್ದಾರೆ. ಅಗ್ರ ಸ್ಥಾನದಲ್ಲಿರುವ ಕೊಹ್ಲಿಗಿಂತ ಕೇವಲ 5 ಅಂಕ ಕಡಿಮೆ ಹೊಂದಿದ್ದು, ಇಂದು ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆಯುವ ಅವಕಾಶ ಹೊಂದಿದ್ದಾರೆ.
ಭಾರತದ ರೋಹಿತ್ ಶರ್ಮಾ 825 ಅಂಕಗಳನ್ನು ಹೊಂದಿದ್ದು 3ನೇ ಸ್ಥಾನದಲ್ಲಿದ್ದಾರೆ. 4ರಲ್ಲಿ ರಾಸ್ ಟೇಲರ್, 5ರಲ್ಲಿ ಆ್ಯರೋನ್ ಫಿಂಚ್ , 6ರಲ್ಲಿ ಜಾನಿ ಬೈರ್ ಸ್ಟೋವ್ ಇದ್ದಾರೆ.ಇನ್ನು ಬೌಲಿಂಗ್ ಶ್ರೇಯಾಂಕದಲ್ಲಿ ಟ್ರೆಂಟ್ ಬೌಲ್ಟ್ , ಮುಜೀಬ್ ಉರ್ ರಹಮಾನ್, ಮ್ಯಾಟ್ ಹೆನ್ರಿ, ಜಸ್ಪ್ರೀತ್ ಬುಮ್ರಾ, ಕಗಿಸೋ ರಬಾಡ ಅಗ್ರ 5ರಲ್ಲಿದ್ದಾರೆ.