ಜಿ.ಪಂ ಮತ್ತು ತಾ.ಪಂ ಚುನಾವಣೆ ; ಸರಣಿ ಸಭೆ, ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್

ಮಂಡ್ಯ :- ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ಹಾಗೂ ಕಾರ್ಯಕರ್ತರು ಹಗಲಿರುಳು ಶಕ್ತಿ ಮೀರಿ ಶ್ರಮಿಸುವಂತೆ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಕರೆ ನೀಡಿದರು.

ಮದ್ದೂರು ಪಟ್ಟಣದ ಶಿವಪುರದ ಶ್ರೀ ವೆಂಕಟೇಶ್ವರ ರೆಸಿಡೆನ್ಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಪ್ರತಿ ದಿನವೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಾ ಜನರನ್ನು ಸಂಕಷ್ಟಕ್ಕೆ ದೂಡುತ್ತಾ
ಜನ ಸಾಮಾನ್ಯರ ರಕ್ತ ಹೀರುವ ಕೆಲಸ ಮಾಡುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ಇನ್ನು ಕೆಲ ದಿನಗಳಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆಯೂ ನಡೆಯುತ್ತಿರುವುದರಿಂದ ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆಯೂ ನಡೆಯಬಹುದು ಆಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗುವಂತೆ ಮನವಿ ಮಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಗುರುಚರಣ್ ಕಣಕ್ಕಿಳಿಯುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಭವಿಷ್ಯ ನುಡಿದರು.

ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಘೋಷಣೆ ವೇಳೆ ಹಲವು ಅಡೆ ತಡೆಗಳು ಎದುರಾಗುತ್ತಿದ್ದವು. ಕ್ಷೇತ್ರದಲ್ಲಿ ಮಧು ಮಾದೇಗೌಡ , ಬಿ.ರಾಮಕೃಷ್ಣ , ಗುರುಚರಣ್ ಎಂಬ ಮೂರು ಬಣಗಳಿದ್ದವು. ಆದರೆ ಈ ಬಾರಿ ಆ ತರಹದ ಯಾವುದೇ ಗೊಂದಲವಿಲ್ಲ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಎಲ್ಲಾ ನಾಯಕರ ಮನವೊಲಿಸಿ ಒಂದುವರೆ ವರ್ಷಕ್ಕೂ ಮುಂಚೆಯೇ ಗುರುಚರಣ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ ಎಂದು ಸಭೆಗೆ ತಿಳಿಸಿದರು.

ಕಾಂಗ್ರೆಸ್ ಪಕ್ಷದಿಂದ ಈಗಾಗಲೇ
ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗಿರುವ ಪಕ್ಷದ ಪ್ರಮುಖ ನಾಯಕರು , ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ಧು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಶಿಂಷಾ ಬ್ಯಾಂಕ್ ನಿರ್ದೇಶಕ ಸತೀಶ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್ ಬಾಬು, ಸದಸ್ಯರಾದ ರಾಜು,ಕಮಲ್,ಮುನ್ಸಿಫ್ ಮುಖಂಡರಾದ ಅರುಣ್ ,ಸಿದ್ದು, ಆತ್ಮಾನಂದ ಸೇರಿದಂತೆ ಇತರರು ಹಾಜರಿದ್ದರು.

ವರದಿ : ಗಿರೀಶ್ ರಾಜ್ ಮಂಡ್ಯ.

Share

Leave a Reply

Your email address will not be published. Required fields are marked *