ಕೊಲೆ ಯತ್ನ ಆರೋಪ ಪ್ರಕರಣ :ತುರುವೇಕೆರೆ ಶಾಸಕ, ಆತನ ಪುತ್ರ ತೇಜು ವಿರುದ್ಧ FIR ದಾಖಲು

ತುಮಕೂರುಕೊಲೆ ಯತ್ನ ಆರೋಪ ಪ್ರಕರಣ ಸಂಬಂಧ ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಮತ್ತು ಅವರ ಮಗ ತೇಜು ಜಯರಾಂ ವಿರುದ್ಧ ಸಿಎಸ್​ಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಶಾಸಕ ಮಸಾಲೆ ಜಯರಾಮ್ ಅವರ ಮಗ ತೇಜ್ ಜಯರಾಮ್ ಅವರ ಮೇಲೆ ದುಷ್ಕರ್ಮಿಗಳು ನಿನ್ನೆ ರಾತ್ರಿ ತಾಲೂಕಿನ ಹೆಬ್ಬೂರು ಬಳಿ ದಾಳಿ ಮಾಡಿ ಹತ್ಯೆ ಮಾಡಲು ಯತ್ನ ನಡೆಸಿದ್ದರು ಎಂಬ ಘಟನೆ ಈಗ ಭಿನ್ನ ತಿರುವುಪಡೆದುಕೊಂಡಿದೆ.

ಶಾಸಕ ಮಸಾಲೆ ಜಯರಾಂ ಮತ್ತು ಅವರ ಮಗ ತೇಜು, ವಸಂತ್, ಯದುನಂದನ ಸೇರಿದಂತೆ ಐವರು ಹೆಬ್ಬೂರು ವೃತ್ತದಲ್ಲಿ ವಿನಾಕಾರಣ ಜಗಳ ತೆಗೆದುಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅವ್ವೇರಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬುವರು ದೂರು ನೀಡಿದ್ದಾರೆ. ಏಪ್ರಿಲ್ 7ರಂದು ನನ್ನ ಅಣ್ಣನ ತಿಥಿ ಕಾರ್ಯದ್ದ ಹಿನ್ನೆಲೆಯಲ್ಲಿ ಹಿಂದಿನ ದಿನ ರಾತ್ರಿ ಕಾರಿನಲ್ಲಿ ನಾನು ಮತ್ತು ನನ್ನ ಅಣ್ಣನ ಮಗ ವೇಣುಗೋಪಾಲ್​ ದಿನಸಿ ಹಾಗೂ ತರಕಾರಿ ತರಲು ತುಮಕೂರು ಮಾರುಕಟ್ಟೆಗೆ ಹೋಗಿದ್ದೆವು. ವಾಪಸ್ ಊರಿಗೆ ಬರುವಾಗ ಹೆಬ್ಬೂರು ವೃತ್ತದಲ್ಲಿ ಕಾರಿಗೆ ಅಡ್ಡಲಾಗಿ ಮತ್ತೊಂದು ಕಾರು ಬಂದು ನಿಂತಿತು.

ಪಕ್ಕಕ್ಕೆ ಹಾಕುವಂತೆ ಕೇಳಿದಾಗ 6ರಿಂದ 7 ಮಂದಿ ಕಾರಿನಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಏಕಾಏಕಿ ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆ ನಡೆಸುವಾಗ ಸಾರ್ವಜನಿಕರು ಮಧ್ಯ ಪ್ರವೇಶಿಸಿ ತಡೆದರು. ಊರಿಗೆ ಹೋಗುತ್ತಿದ್ದ ವೇಳೆ ನೆಟ್ಟಿಕೆರೆ ಗೇಟ್ ಬಳಿ ಬಂದಾಗ ಶಾಸಕ ಮಸಾಲ ಜಯರಾಂ ನನ್ನ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ವಸಂತ ಎಂಬಾತ ಬ್ಯಾಟಿನಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ. ಅಲ್ಲದೆ ಕಾರನ್ನು ಜಖಂಗೊಳಿಸಿ, ಕೊಲೆ ಮಾಡಲು ಯತ್ನಿಸಿದರು ಎಂದು ಕೃಷ್ಣಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

Share

Leave a Reply

Your email address will not be published.