ಆನ್ ಲೈನ್ ಗೇಮ್ ಆಡಿ ವಿಕಾರವಾಗಿ ತಲೆ ಕೂದಲು ಕತ್ತರಿಸಿಕೊಂಡ ಉಪ್ಪಿನಂಗಡಿಯ ಬಾಲಕ!

ದಕ್ಷಿಣ ಕನ್ನಡಇಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಪಬ್ಜಿ ಗೇಮ್ ರೀತಿಯ ಫ್ರೀ ಫಯರ್ ಗೇಮ್ ಆಡಿಕೊಂಡು ತಲೆ ಕೂದಲನ್ನು ವಿಚಿತ್ರವಾಗಿ ಕತ್ತರಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇತ್ತೀಚೆಗೆ ಮಂಗಳೂರು ಬಳಿ ಪಬ್ಜಿ ಗೇಮ್ ವಿಚಾರಕ್ಕೆ ಬಾಲಕನ ಕೊಲೆ ನಡೆದು, ಇಡೀ ಕರಾವಳಿ ಬೆಚ್ಚಿ ಬಿದ್ದಿತ್ತು. ಇದೀಗ, ಉಪ್ಪಿನಂಗಡಿಯ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಫ್ರೀ ಫಯರ್ ಗೇಮ್​ನ ಟಾಸ್ಕ್ ಭಾಗವಾಗಿ ತನ್ನ ತಲೆ ಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ತನ್ನ ತಲೆ ಕೂದಲನ್ನು ವಿಕಾರವಾಗಿ ಕತ್ತರಿಸಿರುವುದನ್ನು ಗಮನಿಸಿದ ಹೆತ್ತವರು ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ಸುಳ್ಳು ಕತೆ ಕಟ್ಟಿ, ತನ್ನ ಗೆಳೆಯರು ಹೇಳಿದಕ್ಕಾಗಿ ಈ ತರ ಕೂದಲು ಕತ್ತರಿಸಿದ್ದಾಗಿ ಹೇಳಿದ್ದ. ಹೆತ್ತವರು ಮತ್ತಷ್ಟು ವಿಚಾರಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ. ತಾನು ಫ್ರೀ ಪೈಯರ್ ಆನ್‌ಲೈನ್ ಆಟದಲ್ಲಿ ಬರುವ ಟಾಸ್ಕ್ ಒಂದರಂತೆ ಮೊಬೈಲ್ ಮುಂಭಾಗದಲ್ಲಿ ತಲೆ ಕೂದಲು ಕತ್ತರಿಸಿಕೊಂಡಿರುವುದಾಗಿ ತಿಳಿಸಿದ್ದಾನೆ.

ವಿದ್ಯಾರ್ಥಿಯ ಈ ಕೃತ್ಯದಿಂದ ಕಂಗಾಲಾದ ಪೋಷಕರು, ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಈ ವೇಳೆ ಗೇಮ್ ಹಿಂದೆ ಇನ್ನೂ ಕೆಲವು ಮಕ್ಕಳು ಭಾಗಿಯಾಗಿರುವುದು ಕಂಡು ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ್ಪಿನಂಗಡಿ ಪೊಲೀಸರು, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡಿ ಇಂತಹ ಆನ್​ಲೈನ್​ ಆಟಗಳಲ್ಲಿ ಅಡಗಿರುವ ಗಂಭೀರತೆಯ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಜೊತೆಗೆ ಪೋಷಕರು ಮಕ್ಕಳಿಗೆ ಆನ್​ಲೈನ್​ ತರಗತಿ ನೆಪದಲ್ಲಿ ಮೊಬೈಲ್ ನೀಡುವುದಕ್ಕೆ ನಿರ್ಬಂಧ ವಿಧಿಸಿ, ಪ್ರತಿ ದಿನ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇಡುವಂತೆ ಸೂಚಿಸಿದ್ದಾರೆ.

 

Share

Leave a Reply

Your email address will not be published.