ಲಾಕ್‘ಡೌನ್ ಮಾಡಿದ್ರೆ ಸರ್ಕಾರಕ್ಕೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ: ಸಚಿವ ಮಾಧುಸ್ವಾಮಿ

ಚಾಮರಾಜನಗರ: ಲಾಕ್‍ಡೌನ್ ಮಾಡಿದ್ರೆ ಸರ್ಕಾರಕ್ಕೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.ಏತ ನೀರಾವರಿ ಮೂಲಕ ನೀರು ತುಂಬಿಸುವ ಮಾಸ್ಟರ್ ಪ್ಲಾನ್ ಕುರಿತು ಚಾಮರಾಜನಗರದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಕೊರೊನಾ ನಿಯಂತ್ರಣಕ್ಕೆ ನೈಟ್ ಕಫ್ರ್ಯೂ ಮಾಡಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ನಮ್ಮ ನಿರೀಕ್ಷೆ ಮೀರಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮ ಬೀರುತ್ತಿದೆ. ಜೀವನ, ಜೀವ ಎರಡು ನೋಡಬೇಕಿದೆ. ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೋ ನೋಡಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಮಾತನಾಡಿರುವ ಅವರು, ಲಾಕ್ ಡೌನ್ ಮಾಡಿದ್ರೆ ಹೆವಿ ರೆವಿನ್ಯೂ ಲಾಸ್ ಆಗುತ್ತದೆ.

ಕಳೆದ ಬಾರಿ ಲಾಕ್ ಡೌನ್ ಮಾಡಿ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಸುಬುದಾರರಿಗೆ ಕೆಲಸ ನಿಲ್ಲಿಸಿ ಅಂದ್ರೆ ಅವರಿಗೆ ಪರಿಹಾರ ನೀಡಬೇಕಾಗುತ್ತದೆ. ಸಿಎಂ ಹಣಕಾಸು ಸಚಿವಾಲಯದ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕು. ಲಾಕ್ ಡೌನ್ ಮಾಡಿ ಎಂದು ಹೇಳುತ್ತಾರೆ. ಆದರೆ ಇಂಡಸ್ಟ್ರಿ, ಆಟೋ ಡ್ರೈವರ್ ಕೆಲಸ ನಿಲ್ಲಿಸಿದ್ರೆ ತುಂಬಾ ತೊಂದರೆಯಾಗುತ್ತೆ.

ಇದೆಲ್ಲಾ ಯೋಚಿಸಿ ನಿರ್ಧಾರ ಮಾಡಬೇಕಿದೆ ಎಂದು ಲಾಕ್‍ಡೌನ್ ನಿರ್ಧಾರವನ್ನು ಸಚಿವ ಮಾಧುಸ್ವಾಮಿ ತಳ್ಳಿ ಹಾಕಿದ್ದಾರೆ.ರಾಜ್ಯದಲ್ಲಿ ಬೆಡ್ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಇರುವ 50 ಬೆಡ್ ಕೊಟ್ಟಿದ್ದೇವೆ. ಜಿಲ್ಲಾ ಮಟ್ಟದಲ್ಲಿ 200 ರಿಂದ 400 ಬೆಡ್ ಇದೆ. ಎಲ್ಲಾ ತಾಲೂಕುಗಳಲ್ಲಿ 5 ರಿಂದ 6 ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಮಕ್ಕಳು ಈ ಬಾರಿ ಹಾಸ್ಟೆಲ್‍ನಲ್ಲಿದ್ದಾರೆ.

ಅವರ ಪರೀಕ್ಷೆ ಯಾವಾಗ ನಡೆಯುತ್ತದೆ ಎಂದು ಗೊತ್ತಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಕೋವಿಡ್ ಸೆಂಟರ್, ಎಕ್ಸ್ಟ್ರಾ ಕೋವಿಡ್ ಸೆಂಟರ್ ಮಾಡಲೂ ಈ ಬಾರಿ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಹೋಂ ಕ್ವಾರಂಟೈನ್‍ಗೆ ಹೆಚ್ಚು ಒತ್ತು ಕೊಡಲಾಗಿದೆ. ಕಳೆದ ಬಾರಿ ಹಾಸ್ಟೆಲ್ ತೆಗೆದುಕೊಂಡು ಕೋವಿಡ್ ಸೆಂಟರ್ ಮಾಡಿದ್ದೆವು. ಮೇ-ಜೂನ್ ನಲ್ಲಿ ಪರೀಕ್ಷೆ ಮುಗಿದರೆ ಹಾಸ್ಟೆಲ್ ಸುಪರ್ದಿಗೆ ತೆಗೆದುಕೊಂಡು ಕೋವಿಡ್ ಸೆಂಟರ್ ಮಾಡುತ್ತೇವೆ ಎಂದರು.

ಇನ್ನು ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುವುದು ಬೆಂಗಳೂರಲ್ಲಿ ಕಷ್ಟವಾಗಿತ್ತು. ನಿನ್ನೆ, ಮೊನ್ನೆಯಿಂದ ಪ್ರೈವೆಟ್ ಹಾಸ್ಪಿಟಲ್ ಈ ವಿಚಾರವಾಗಿ ಸಹಕರಿಸಿರಲಿಲ್ಲ. ಕೊರೋನಾ ರೋಗಿಗಳಿಗೆ 50% ಬೆಡ್ ಕೊಡಲೇಬೇಕು ಎಂದು ತಿಳಿಸಿದ್ದೇವೆ. ಬೆಡ್ ಕೊಡುವ ವಿಚಾರವನ್ನು ಕಾನೂನು ಬದ್ಧವಾಗಿ ಮಾಡುತ್ತೇವೆ ಎಂದು ಹೇಳಿದರು.

Share