ಎಸಿಬಿ ದಾಳಿ: ಸ್ಟವ್ ಮೇಲಿಟ್ಟು ಐದು ಲಕ್ಷ ನಗದು ಸುಟ್ಟುಹಾಕಿದ ಭೂಪ :ಎಲ್ಲಿ ಅಂತೀರಾ..?

ರಂಗಾರೆಡ್ಡಿ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮತ್ತೊಂದು ಭ್ರಷ್ಟಾಚಾರದ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯ ಹಾಗೂ ಶಾಕಿಂಗ್ ನ್ಯೂಸ್ ಏನೆಂದರೆ, ಎಸ್ಸಿಬಿ ದಾಳಿಗೆ ಹೆದರಿ ಅಧಿಕಾರಿಯ ಸಹಚರನೊಬ್ಬ 5 ಲಕ್ಷ ರೂ. ನಗದು ಸುಟ್ಟು ಹಾಕುವ ಯತ್ನ ನಡೆಸಿದ್ದಾನೆ. ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಕೊರೆಂಟಕುಂಟ್ ತಾಂಡಾದ ಸರ್ಪಂಚ್ ರಾಮುಲು ಬೊಲಾಂಪಲ್ಲಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂದ ವೆಲ್ಡಂಡ ತಹಶೀಲ್ದಾರ್ ಅವರಿಗೆ ಪರವಾನಗಿ ನೀಡುವಂತೆ ಮತ್ತು ಸರ್ವೆ ಮಾಡುವಂತೆ ಮನವಿ ಮಾಡಿದ್ದರು.
ಆದರೆ ಈ ಸಂಬಂಧ ತಹಶೀಲ್ದಾರ್, ವೆಂಕಟಯ್ಯ ಗೌಡ್ ಅವರ ನಿವಾಸದಲ್ಲಿ ಮೀಟಿಂಗ್ ಮಾಡುವಂತೆ ಸಲಹೆ ನೀಡಿದ್ದರು. ಈ ವೇಳೆ ವೆಂಕಟಯ್ಯ ಗೌಡ್ ಆರು ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ ಇಬ್ಬರ ನಡುವೆ ಐದು ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸರ್ಪಂಚ್ ರಾಮುಲು ಎಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಮುಟ್ಟಿಸಿದ್ದರು. ಇನ್ನೊಂದೆಡೆ ರಾಮುಲು ವೆಂಕಟಯ್ಯ ಅವರ ಮನೆಗೆ ತೆರಳಿ ಹಣ ನೀಡಿದ್ದರು. ಈ ವೇಳೆ ವೆಂಕಟಯ್ಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ವಿಷಯ ಗೊತ್ತಾಗುತ್ತಿದ್ದಂತೆ ವೆಂಕಟಯ್ಯ, ರಾಮುಲು ನೀಡಿದ್ದ ಐದು ಲಕ್ಷ ರೂ ನಗದನ್ನು ಗ್ಯಾಸ್ ಸ್ಟೌವ್ ಮೇಲಿರಿಸಿ ಸುಟ್ಟು ಹಾಕುವ ಯತ್ನ ಮಾಡಿದ್ದಾರೆ. ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆಸಿದಾಗ ನೋಟುಗಳು ಶೇ 70 ರಷ್ಟು ಸುಟ್ಟು ಕರಕಲಾಗಿದ್ದವು. ಎಸಿಬಿ ಅಧಿಕಾರಿಗಳು ಆ ಸುಟ್ಟ ನೋಟುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನೊಂದೆಡೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ಸೈದುಲು ಅವರ ಎಲ್ಬಿ ನಗರ ನಿವಾಸದ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.