ರಾಬರ್ಟ್ ಸಿನಿಮಾದ ಮೊದಲಾರ್ಧ ಹೇಗಿದೆ ನೋಡಿ!

ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ತೆರೆಗೆ ಬಂದಿರುವ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಧೂಳೆಬ್ಬಿಸುತ್ತಿದೆ. ಮೊದಲ ದಿನ ರಾಜ್ಯಾದ್ಯಂತ ಬಹುತೇಕ ಎಲ್ಲಾ ಚಿತ್ರಮಂದಿರಗಳು ಹೌಸ್​​ಫುಲ್​ ಪ್ರದರ್ಶನ ಕಾಣುತ್ತಿದೆ. ಟ್ರೈಲರ್​ನಲ್ಲಿ ದರ್ಶನ್​ ಸಾಕಷ್ಟು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಪ್ರೇಕ್ಷಕರು ಸಾಕಷ್ಟು ಕುತೂಹಲಗಳೊಂದಿಗೆ ಚಿತ್ರಮಂದಿರಕ್ಕೆ ಕಾಲಿಟ್ಟಿದ್ದಾರೆ. ಹಾಗಾದರೆ, ರಾಬರ್ಟ್​ ಸಿನಿಮಾದ ಮೊದಲಾರ್ಧ ಹೇಗಿದೆ ಎನ್ನುವ ವಿಚಾರ ಈಗ ಗೊತ್ತಾಗಿದೆ.

ದರ್ಶನ್​ ಸಿನಿಮಾದಲ್ಲಿ ಎಂಟ್ರಿ ನೋಡೋಕೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆ್ಯಕ್ಷನ್​ ದೃಶ್ಯಗಳೊಂದಿಗೆ ಅವರಿಗೆ ಎಂಟ್ರಿ ಕೊಡಿಸೋಕೆ ನಿರ್ದೇಶಕರು ಕಾಯುತ್ತಿರುತ್ತಾರೆ. ಆದರೆ, ಈ ಬಾರಿ ನಿರ್ದೇಶಕ ತರುಣ್​ ಸುಧೀರ್​ ದರ್ಶನ್​ಗೆ ಬೇರೆ ರೀತಿಯಲ್ಲಿ ಎಂಟ್ರಿ ಕೊಡಿಸಿದ್ದಾರೆ. ಹನುಮನ ಪಾತ್ರದ ಮೂಲಕ ದರ್ಶನ್​ ಎಂಟ್ರಿ ಕೊಡುತ್ತಾರೆ.

ದರ್ಶನ್​ ಈ ಮೊದಲು ಸಾಕಷ್ಟು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾದ ಪಾತ್ರ ಇವೆಲ್ಲವುಗಳಿಗಿಂತಲೂ ವಿಶಿಷ್ಟವಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ದರ್ಶನ್​ ಮಿಂಚಿದ್ದಾರೆ. ಇದು ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಾಯಕಿಯ ಪಾತ್ರ ಅಷ್ಟಾಗಿ ಹೈಲೈಟ್​ ಆಗುವುದಿಲ್ಲ. ಅಷ್ಟೇ ಅಲ್ಲ ಅವರ ಎಂಟ್ರಿ ಕೂಡ ತುಂಬಾನೇ ರೊಮ್ಯಾಂಟಿಕ್​ ಆಗಿರುತ್ತದೆ. ಆದರೆ, ರಾಬರ್ಟ್​ ಸಿನಿಮಾ ನಾಯಕಿ ಆಶಾ ಭಟ್​ಗೆ ಮಾಸ್ ಎಂಟ್ರಿ ಸಿಕ್ಕಿದೆ.

ಸಿನಿಮಾ ಅಂದ ಮೇಲೆ ಅಲ್ಲಿ ಹಾಸ್ಯ ಅನ್ನೋದು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದೇ ರೀತಿ, ರಾಬರ್ಟ್​ ಸಿನಿಮಾದ ಮೊದಲಾರ್ಧದಲ್ಲಿ ಕಾಮಿಡಿ ಪಾತ್ರಗಳು ಸಾಕಷ್ಟು ಕ್ಲಿಕ್​ ಆಗಿದೆ. ಶಿವರಾಜ್​ ಕೆಆರ್ ಪೇಟೆ, ಚಿಕ್ಕಣ್ಣ, ಧರ್ಮಣ್ಣ ಪಾತ್ರಗಳು ಸಾಕಷ್ಟು ಹೈಲೈಟ್​ ಆಗಿದೆ. ದರ್ಶನ್​ ಸಿನಿಮಾ ಎಂದಾಗ ನೆನಪಾಗೋದು ಆ್ಯಕ್ಷನ್​ ದೃಶ್ಯಗಳು. ರಾಬರ್ಟ್​ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್​ ಇದೆ ಎಂದು ಹೇಳಲಾಗಿತ್ತು. ಮೊದಲಾರ್ಧದಲ್ಲಿ ಕೇವಲ ಎರಡು ಆ್ಯಕ್ಷನ್​ ದೃಶ್ಯ ಮಾತ್ರ ಇಡಲಾಗಿದೆ. ಹೀಗಾಗಿ, ಪ್ರೇಕ್ಷಕರು ಎರಡನೇ ಆ್ಯಕ್ಷನ್​ ದೃಶ್ಯಕ್ಕಾಗಿ ಕಾದು ಕೂರಬೇಕಾಗಿದೆ.

ಕಣ್ಣು ಹೊಡ್ಯಾಕ ಹಾಡನ್ನು ಚಿತ್ರತಂಡ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿತ್ತು. ಈ ಹಾಡನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈ ಹಾಡು ಪ್ರೇಕ್ಷಕರಿಗೆ ಮೊದಲಾರ್ಧದಲ್ಲೇ ಎದುರುಗೊಳ್ಳಲಿದೆ. ಇದು ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದೆ. ಸಿನಿಮಾದ ಇಂಟರ್​ವಲ್​ ಬಂದರೂ ಕಥೆ ಏನು ಎಂಬುದನ್ನು ರಾಬರ್ಟ್​ ಗುಟ್ಟಾಗಿಯೇ ಇಟ್ಟಿದ್ದಾನೆ. ಇದು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Share

1 thought on “ರಾಬರ್ಟ್ ಸಿನಿಮಾದ ಮೊದಲಾರ್ಧ ಹೇಗಿದೆ ನೋಡಿ!

Comments are closed.