ಯಡಿಯೂರಪ್ಪ ರಾಜೀನಾಮೆ ಕುರಿತ ಊಹಾಪೋಹಗಳಿಗೆ ಉತ್ತರ ಕೊಡಕ್ಕಾಗಲ್ಲ: ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜುಲೈ 25ರಂದು ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆ ಹಾಗೂ ಔತಣ ಕೂಟವನ್ನು ಹೈಕಮಾಂಡ್ ಸೂಚನೆ ಮೇರೆಗೆ ರದ್ದುಪಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಕೋದಂಡರಾಮ ದೇವಾಲಯದಲ್ಲಿ ಧನ್ವಂತರಿ ಯಾಗದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಸರ್ಕಾರಕ್ಕೆ ಎರಡು ವರ್ಷದ ಹಿನ್ನೆಲೆ ಔತಣ ಕೂಟ, ಶಾಸಕಾಂಗ ಪಕ್ಷದ ಸಭೆಗೆ ನಿರ್ಧರಿಸಲಾಗಿತ್ತು. ಆದರೆ, ಸದ್ಯಕ್ಕೆ ಔತಣ ಕೂಟ, ಶಾಸಕಾಂಗ ಪಕ್ಷದ ಸಭೆ ಮಾಡದಂತೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ರದ್ದಾಗಿದೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕುರಿತ ಊಹಾಪೋಹಗಳಿಗೆ ಉತ್ತರ ಕೊಡಕ್ಕಾಗಲ್ಲ. ಮೊನ್ನೆ ಸಿಎಂ ದೆಹಲಿಗೆ ಹೋಗಿ ಬಂದ ಮೇಲೆ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸೋದು ನನ್ನ ಜವಾಬ್ದಾರಿ ಅಂದಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲರ ಅಭಿಪ್ರಾಯ ಪಡೆದೇ ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ. ನಂತರ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಮುಂದಿನ ಸೂಚನೆ ನೀಡಲಿದ್ದಾರೆ ಎಂದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ವರಿಷ್ಠರ ನಿರ್ಧಾರಕ್ಕೆ ಕಾಯುತ್ತೇವೆ. ಪಕ್ಷದಲ್ಲಿ ನಿಷ್ಠೆ, ನೀತಿ ಪಾಲಿಸೋದು ನಮ್ಮ ಬದ್ಧತೆ. ಸ್ವತಃ ಮುಖ್ಯಮಂತ್ರಿಗಳೇ ವರಿಷ್ಠರ ಸೂಚನೆ ಪಾಲಿಸ್ತೀನಿ ಅಂತ ಹೇಳಿದ್ದಾರೆ. ವರಿಷ್ಠರು ಏನು ನಿರ್ಧಾರ ಮಾಡಿದ್ದಾರೆ ಅಂತ ನಮಗೆ ಗೊತ್ತಿಲ್ಲ. ಕೇಂದ್ರದ ನಿರ್ಧಾರ ಸಿಎಂ ಮತ್ತು ವರಿಷ್ಠರಿಗೆ ಮಾತ್ರ ಗೊತ್ತು. ಏನೇ ನಿರ್ಧಾರ ಬಂದರೂ ಪಾಲಿಸುತ್ತೇವೆ ಎಂದರು.

Share

Leave a Reply

Your email address will not be published. Required fields are marked *